1809-65. ಅಮೆರಿಕ ಸಂಯುಕ್ತ ಸಂಸ್ಥಾನದ 16ನೆಯ ಅಧ್ಯಕ್ಷ (1861-65) ಹಾಗೂ ರಿಪಬ್ಲಿಕ್ ಪಕ್ಷದ ಪ್ರಥಮ ಅಧ್ಯಕ್ಷ. ಪ್ರಸಿದ್ಧ ಕಾನೂನು ತಜ್ಞ ಮತ್ತು ಬರೆಹಗಾರ. ಇವನು ಹಾರ್ಡಿನ್ ಕೌಂಟಿಯ ಕೆಂಟುಕಿಯಲ್ಲಿ 1809 ಫೆಬ್ರವರಿ 12ರಂದು ಜನಿಸಿದ. ತಂದೆ ಥಾಮಸ್, ತಾಯಿ ನಾನ್ಸಿ. ಇವರದು ಬಡಗಿ ಕುಟುಂಬ. ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ ಇವನು ಪುಸ್ತಕಗಳಿಗಾಗಿ ಹತ್ತಾರು ಕಿಮೀ ದೂರ ನಡೆದು ಹೋಗಿ ಪಡೆದುಕೊಳ್ಳುತ್ತಿದ್ದ. ಇವನು ತನ್ನ 19ನೆಯ ವಯಸ್ಸಿನಲ್ಲಿ ವ್ಯಾಪಾರದಲ್ಲಿ ತೊಡಗಿ ದೇಶಪರ್ಯಟನೆ ಮಾಡಿದ. ಆ ಸಮಯದಲ್ಲಿ ಗುಲಾಮರ ಶೋಷಣೆ ಕಂಡು, ಅದನ್ನು ನಿರ್ಮೂಲಗೊಳಿಸುವ ಚಲತೊಟ್ಟ. 1832ರಲ್ಲಿ ನಡೆದ ಬ್ಲಾಕ್‍ಹಾಕ್ ಯುದ್ಧದಲ್ಲಿ ಭಾಗವಹಿಸಿದ. ಅನಂತರ ಸ್ವಲ್ಪಕಾಲ ಅಂಚೆ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ. 1834ರಲ್ಲಿ ನಡೆದ ಸಾಮಾನ್ಯ ವಿಧಾನಸಭೆ ಚುನಾವಣೆಯಲ್ಲಿ ಇಲಿನಾಯ್ಸ್ ಕ್ಷೇತ್ರದಿಂದ ಸ್ಪರ್ಧಿಸಿ, ಸತತವಾಗಿ ಮೂರು ಬಾರಿ ಆಯ್ಕೆಗೊಂಡ. ತನ್ನ ಆಡಳಿತಾವಧಿಯಲ್ಲಿ ಹೊಸ ಆಂದೋಲನವನ್ನುಂಟುಮಾಡಿದನಲ್ಲದೆ, ಆಧುನಿಕ ಅಮೆರಿಕ ನಿರ್ಮಾಣದ ನೀಲಿನಕ್ಷೆ ರೂಪಿಸಿದ. ಅನೇಕ ಅಭಿವೃದ್ಧಿಕಾರ್ಯವನ್ನು ಜಾರಿಗೊಳಿಸಿದ. ಬ್ಯಾಂಕ್ ಉದ್ಯಮದ ಬೆಳೆವಣಿಗೆ, ಕಾಗದನಾಣ್ಯಗಳ ಚಲಾವಣೆ, ಕೈಗಾರಿಕೆಗಳ ಸ್ಥಾಪನೆ, ಕಾಲುವೆಗಳು, ವಿಶ್ವವಿದ್ಯಾಲಯಗಳ ಸ್ಥಾಪನೆ, ರೈಲು ಹಾದಿ ಮತ್ತು ಸೇತುವೆಗಳ ನಿರ್ಮಾಣ, ಕಾರ್ಮಿಕ ಸಂಘಟನೆ-ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ. ಫೆಡರಲ್ ಆದಾಯ ತೆರಿಗೆ ನೀತಿ ನಿರ್ಬಂಧ ಗೊಳಿಸಿದ. ಇವನು 1842 ನವೆಂಬರ್ 4ರಂದು ಮೇರಿಟಾಡ್ ಎಂಬಾಕೆಯನ್ನು ವಿವಾಹವಾದ. 1846ರಲ್ಲಿ ನಡೆದ ಪ್ರಜಾಪ್ರತಿನಿಧಿ ಸಭೆಗೆ ಕಾಂಗ್ರೆಸ್ ಸದ್ಯಸನಾಗಿ ಆಯ್ಕೆಗೊಂಡ. ಅನಂತರ ಸ್ವಲ್ಪ ಸಮಯ ವಕೀಲಿವೃತ್ತಿ ಕೈಗೊಂಡ. ‘ಕಾನ್ಸಸ್ ನೆಬ್ರಾಸ್ಕ್ ಮಸೂದೆ’ಯ ವಿರುದ್ಧ ಮತ್ತೆ ರಾಜಕೀಯ ಪ್ರವೇಶಿಸಿದ. ಹೊಸದಾಗಿ ರಚಿಸಲಾದ ರಾಜ್ಯಗಳಲ್ಲಿ ಗುಲಾಮಗಿರಿ ವ್ಯವಸ್ಥೆಯನ್ನು ನಿಷೇಧಿಸ ಲಾಗಿತ್ತು. ಆದರೆ ಕಾನ್ಸ್‍ಸ್ ಮತ್ತು ನೆಬ್ರಾಸ್ಕ್ ಪ್ರಾಂತಗಳು ಈ ಮಸೂದೆ ಉಲ್ಲಂಘಿಸಿ ಗುಲಾಮಗಿರಿ ವ್ಯವಸ್ಥೆಬೇಕು, ಬೇಡ ಎಂಬುದನ್ನು ನಿರ್ಧರಿ ಸುವ ಹಕ್ಕನ್ನು ತಾವೇ ಪಡೆದು ಕೊಂಡವು. ಈ ಮಸೂದೆಯ ವಿರುದ್ಧ ಇವನು ಹೋರಾಡಿ, ಕಾನ್ಸಸ್ ನೆಬ್ರಾಸ್ಕ್ ಮಸೂದೆಯ ಜನಕನಾದ ಸ್ಟೀಫನ್ ಎ. ಡಗ್ಲಾಸ್‍ನೊಡನೆ ಏಳು ಸಲ ಚರ್ಚಿಸಿ ಗುಲಾಮಗಿರಿ ವ್ಯವಸ್ಥೆಯನ್ನು ರದ್ದುಗೊಳಿಸಿದ. ಗುಲಾಮಗಿರಿ ತೊಡೆದು ಹಾಕಲು ಅನೇಕ ಕಾನೂನುಗಳನ್ನು ಜಾರಿಗೊಳಿಸಿದ. ಗುಲಾಮಗಿರಿ ತೊಲಗಿಸದೇ ರಾಷ್ಟ್ರದ ಪ್ರಗತಿ ಮತ್ತು ಸ್ವಾತಂತ್ರ್ಯ, ಸಮಾನತೆ ಸಾಧಿಸಲು ಸಾಧ್ಯವಿಲ್ಲ ವೆಂದು ಘೋಷಿಸಿದ. 1860ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದಿಂದ ಸ್ಪರ್ಧಿಸಿ ಅಮೆರಿಕದ 16ನೆಯ ಅಧ್ಯಕ್ಷನಾಗಿ ಆಯ್ಕೆಗೊಂಡ. ಇವನು ಅಧ್ಯಕ್ಷನಾಗಿ ರಾಷ್ಟ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದನಲ್ಲದೆ, ರಾಷ್ಟ್ರದಲ್ಲಿ ಶಾಂತಿಸ್ಥಾಪನೆ ಮಾಡಿದ. ಇವನು ಮತ್ತು ಕುಟುಂಬ ವರ್ಗದವರು 1865 ಏಪ್ರಿಲ್ 14ರಂದು ವಾಷಿಂಗ್‍ಟನ್ನಿನ ನಾಟಕ ಮಂದಿರದಲ್ಲಿ ನಾಟಕ ವೀಕ್ಷಿಸುತ್ತಿದ್ದಾಗ ಜಾನ್‍ವಿಲ್ಕ್ಸ್ ಬೂತ್ ಎಂಬವನ ಗುಂಡೇಟಿಗೆ ಬಲಿಯಾಗಿ 1865 ಏಪ್ರಿಲ್ 15ರಂದು ನಿಧನಹೊಂದಿದ.	

(ಎಚ್.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ